ಕಲ್ಪನೆ : ಈ ಪದಕ್ಕೆ ಅನೇಕ ಅರ್ಥಗಳುಂಟು. ದಿನನಿತ್ಯದ ಬಳಕೆಯಲ್ಲಿ ಕಲ್ಪನೆ ಹಾಸ್ಯಭರಿತ, ಅಸ್ವಾಭಾವಿಕ ಅಥವಾ ಅನೈಜ ವಿಚಾರಗಳನ್ನು ಸೂಚಿಸುತ್ತದೆ. ಸಾಧಾರಣವಾಗಿ ನಾವು ಏನಾದರೊಂದು ನಂಬಲಸಾಧ್ಯವಾದ ಸುದ್ದಿಯನ್ನು ಕೇಳಿದಾಗ ಅದು ಕಲ್ಪನಾಪ್ರೇರಿತವಾದ ಸುದ್ದಿ ಎಂದು ತಳ್ಳಿಹಾಕುವುದು ವಾಡಿಕೆ. ಆದರೆ ಕಲ್ಪನೆಗೆ ಮನಶ್ಯಾಸ್ತ್ರದಲ್ಲಿ ವಿಶಿಷ್ಟವಾದ ಅರ್ಥವಿದೆ. ಮೊದಲು ಸ್ಮೃತಿಗೂ ಕಲ್ಪನೆಗೂ ಇರುವ ವ್ಯತ್ಯಾಸವನ್ನು ಗಮನಿಸಬೇಕು. ಸ್ಮೃತಿ ಹಾಗೂ ಕಲ್ಪನೆಗಳು ಮಾನಸಿಕ ವ್ಯಾಪಾರದ ಎರಡು ವಿಭಿನ್ನ ರೂಪಗಳು: ಹಿಂದಿನ ಅನುಭವಗಳ ಪುನರುತ್ಪಾದನೆ ಸ್ಮೃತಿಯಾದರೆ, ಹಿಂದಿನ ಅನುಭವಗಳ ಆಧಾರದ ಮೇಲೆ ರೂಪುಗೊಳ್ಳುವ ಹೊಸ ವಿಚಾರಗಳ ಸೃಷ್ಟಿಯೇ ಕಲ್ಪನೆ. ಸ್ಮೃತಿ ವಾಸ್ತವಿಕ ಘಟನೆಗಳ ಕಟ್ಟಿಗೆ ಒಳಪಟ್ಟಿದ್ದರೆ ಕಲ್ಪನೆ ಅಂಥ ಕಟ್ಟುಗಳಿಂದ ಹೊರತಾಗಿದೆ. ಹೀಗೆಂದ ಮಾತ್ರಕ್ಕೆ ಹಿಂದಿನ ಅನುಭವಗಳಿಗೂ ಕಲ್ಪನೆಗೂ ಯಾವ ಸಂಬಂಧವೂ ಇಲ್ಲವೇ ಇಲ್ಲ ಎಂದಲ್ಲ. ವಾಸ್ತವವಾಗಿ ಕಲ್ಪನೆ ತನ್ನ ಸೃಷ್ಟಿಕಾರ್ಯದಲ್ಲಿ ಹಳೆಯ ಅನುಭವಗಳನ್ನು ಕಚ್ಚಾ ಸಾಮಗ್ರಿಯನ್ನಾಗಿ ಉಪಯೋಗಿಸಿಕೊಳ್ಳುತ್ತದೆ. ಅಂದರೆ ಕಲ್ಪನೆಯ ಮೂಲವಸ್ತು ಹಿಂದಿನ ಅನುಭವಗಳು ಬಿಟ್ಟು ಹೋಗಿರುವ ಮನೋಬಿಂಬಗಳು (ಇಮೇಜಸ್). ಇವನ್ನು ಹೊಸ ರೀತಿಯಲ್ಲಿ ಜೋಡಿಸಿ, ತನಗೆ ಬೇಕಾದ ಹಾಗೆ ಮಾರ್ಪಡಿಸಿಕೊಂಡು, ಹಿಂದೆಂದೂ ಕಾಣದ ಒಂದು ಹೊಸ ಅನುಭವವನ್ನುಂಟುಮಾಡುವುದೇ ಕಲ್ಪನೆ. ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ಅನುಭವಿಸಿದ ಅಥವಾ ಕಂಡು ಕೇಳಿದ ವಿಚಾರಗಳ ಭಾಗಗಳನ್ನು ಕಲೆಹಾಕಿ, ಅವುಗಳ ನಡುವೆ ಯಾವುದೋ ಒಂದು ಹೊಸ ಸಂಬಂಧವನ್ನು ಕಾಣುವುದೇ ಕಲ್ಪನೆಯ ವ್ಯಾಪಾರ ವಿಶೇಷ. ಸಂಕ್ಷೇಪವಾಗಿ ಹೇಳುವುದಾದರೆ, ಹಳೆಯ ಅನುಭವಗಳಿಗೆ, ವಿಚಾರಗಳಿಗೆ, ಹೊಸ ರೂಪು ಕೊಟ್ಟು ಹೊಸ ಸಂಬಂಧ ಕಲ್ಪಿಸುವುದೇ ಕಲ್ಪನೆ.

ನಮ್ಮ ಆಕಾಂಕ್ಷೆ ಮತ್ತು ಉದ್ವೇಗಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು ಕಲ್ಪನೆಯ ಉದ್ದೇಶ. ಯಾವುದೋ ಒಂದು ವಸ್ತುವಿನ ಬಗ್ಗೆ ನಮಗಿರುವ ಆಸೆ, ಭೀತಿ ಅಥವಾ ಕುತೂಹಲ ನಾವು ಆ ವಸ್ತುವನ್ನು ಕಲ್ಪಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ವಾಸ್ತವ ಜೀವನದಲ್ಲಿ ಸಾಧಿಸಲಾಗದ ಅಥವಾ ಪಡೆಯಲಾಗದ ಗುರಿಗಳನ್ನು ಸಾಧಿಸಲು ಅಥವಾ ಪಡೆಯಲು ಕಲ್ಪನೆ ಒಂದು ಮಾರ್ಗ. ಆದ್ದರಿಂದ ಕಲ್ಪನೆ ನಮ್ಮ ಪ್ರೇರಣೆಗಳನ್ನು ಪ್ರತಿಬಿಂಬಿಸುತ್ತದೆ. ಯಾವ ಪ್ರೇರಣೆಯೂ ಇರದಿದ್ದರೆ ಕಲ್ಪನೆ ಅಸಾಧ್ಯ. ಆದ್ದರಿಂದಲೇ ಒಬ್ಬ ವ್ಯಕ್ತಿಯ_ಉದಾಹರಣೆಗೆ ಒಬ್ಬ ಕಲೆಗಾರನ ಅಥವಾ ಸಾಹಿತಿಯ_ಕಲ್ಪನೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಕಲ್ಪನೆಗಳಿಗೆ ಆಧಾರಭೂತವಾಗಿರುವ ಪ್ರೇರಣೆಗಳನ್ನು ಅವಶ್ಯವಾಗಿ ಅಭ್ಯಾಸ ಮಾಡಬೇಕಾಗುತ್ತದೆ.

ಕಲ್ಪನೆಯಲ್ಲಿ ಅನೇಕ ಪ್ರಭೇದಗಳನ್ನು ಗುರುತಿಸಬಹುದು. ಮನೋವಿಲಾಸ (ರೆವರೀ), ಹಗಲುಗನಸು (ಡೇ ಡ್ರೀಂ), ಕನಸು (ಡ್ರೀಂ)_ಇವು ಕಲ್ಪನೆಯ ವಿವಿಧ ಪ್ರಕಾರಗಳು. ಮನೋವಿಲಾಸದಲ್ಲಿ ಆಲೋಚನೆಗಳು ಸ್ವತಂತ್ರವಾಗಿ ಹರಿಯುತ್ತವೆ; ಹಿಂದಿನ ಅನುಭವಗಳು ಸ್ಮೃತಿಪಟಲದ ಮೇಲೆ ಸ್ವೇಚ್ಛೆಯಾಗಿ ಹಾದುಹೋಗುತ್ತವೆ. ಹಗಲು ಗನಸಿನಲ್ಲಿ ಮುಂದೆ ಅನುಭವಿಸಲಿರುವ, ಒದಗಲಿರುವ ಸುಖಸಂತೋಷಗಳ ಗಾಳಿ ಗೋಪುರವೇ ನಿರ್ಮಾಣವಾಗುತ್ತದೆ. ಈ ಕಲ್ಪನಾಪ್ರಕಾರಗಳಲ್ಲಿ ಮನೋವ್ಯಾಪಾರ ವಾಸ್ತವ ಪ್ರಪಂಚದಿಂದ ದೂರವಾಗಿರುವುದಲ್ಲದೆ, ವ್ಯಕ್ತಿ ತನ್ನ ಆಕಾಂಕ್ಷೆ ಚಿಂತೆಗಳಿಗೆ ಮಿತವಾದ ಪರಿಹಾರಗಳನ್ನು ಕಂಡುಕೊಳ್ಳುತ್ತಾನೆ. ಒಂದು ಪಕ್ಷ ಈ ಕಲ್ಪನಾ ಪ್ರಪಂಚದಲ್ಲೇ ಆತ ಮುಳುಗಿಹೋದರೆ ಅತೃಪ್ತಿ, ನಿರಾಶೆ, ಉದ್ವೇಗಗಳು ಉಂಟಾಗುತ್ತವೆ. ಆದ್ದರಿಂದ ಮನೋವಿಲಾಸ, ಹಗಲುಗನಸು, ಮುಂತಾದ ಕಲ್ಪನಾಪ್ರಕಾರಗಳನ್ನು ಮಿತಿ ಮೀರಿ ಬಳಸಿದಾಗ ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಧಕ್ಕೆಯುಂಟಾಗುತ್ತದೆ.

ಮೇಲೆ ಹೇಳಿದ ಕಲ್ಪನಾಪ್ರಕಾರಗಳಿಗೂ ಸೃಜನಾತ್ಮಕ ಕಲ್ಪನೆಗೂ ವ್ಯತ್ಯಾಸವಿದೆ. ಸೃಜನಾತ್ಮಕ ಕಲ್ಪನೆ ಹಳೆಯ ಅನುಭವಗಳ ಸಮೂಹಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ, ಅವುಗಳಿಗೆ ಹೊಸ ಹೊಸ ರೂಪ ಕೊಡುವ ನಿರಂತರ ಉದ್ದೇಶ ಹೊಂದಿರುತ್ತದೆ. ಇದು ಯಾಂತ್ರಿಕವಾಗಿ ನಡೆಯುವ ವ್ಯಾಪಾರವಲ್ಲ. ನಿರ್ದಿಷ್ಟವಾದ ಉದ್ದೇಶ ಹಾಗೂ ನಿರಂತರವಾದ ಶ್ರಮಗಳು ಈ ತರಹೆಯ ಕಲ್ಪನೆಯಲ್ಲಿ ಅಡಕವಾಗಿವೆ. ಸೃಜನಾತ್ಮಕ ಕಲ್ಪನೆಗೆ ದೂರದರ್ಶಿತ್ವ, ಮುಂದಾಲೋಚನೆ, ಪ್ರಗತಿಶೀಲ ಮನೋಭಾವ, ಸಮಸ್ಯೆಗಳಿಗೆ ಸೂಕ್ತಪರಿಹಾರ ಕಾಣುವುದು, ಅಪೂರ್ಣವನ್ನು ಪೂರ್ಣಗೊಳಿಸುವುದು_ ಮುಂತಾದ ವಿಶಿಷ್ಟ ಲಕ್ಷಣಗಳಿವೆ. ಈ ತರದ ಕಲ್ಪನೆಯೇ ವ್ಯಕ್ತಿಯ ಬುದ್ಧಿವಿಕಾಸಕ್ಕೆ ಪೋಷಕ. ಇದು ವೈಜ್ಞಾನಿಕ ಸಂಶೋಧನೆಯಲ್ಲಿ, ಸಾಹಿತ್ಯ ಮತ್ತು ಕಲೆಗಳ ಅಭಿವೃದ್ಧಿಯಲ್ಲಿ ಸಹಕಾರಿ. ಸೃಜನಾತ್ಮಕ ಕಲ್ಪನೆ ಬುದ್ಧಿವಂತಿಕೆಯ ಲಕ್ಷಣವೂ ಆಗಿರುವುದರಿಂದಲೇ ಬುದ್ಧಿವಂತಿಕೆಯ ಪರೀಕ್ಷೆಗಳು ಕಲ್ಪನಾಸಾಮರ್ಥ್ಯವೀಕ್ಷಣೆಯನ್ನೂ ಒಳಗೊಂಡಿರುತ್ತವೆ.

ಕಲ್ಪನೆಗೆ ಸಂಬಂಧಪಟ್ಟಂತೆ ಮುಖ್ಯವಾಗಿ ಎರಡು ಅಂಶಗಳನ್ನು ಕುರಿತು ಹೆಚ್ಚು ಸಂಶೋಧನೆ ನಡೆದಿದೆ. ಅದು ಕಲ್ಪನಾಸಂಪತ್ತು ಮತ್ತು ಸಾಮರ್ಥ್ಯಗಳ ನಿರ್ಧಾರದ ಬಗ್ಗೆ ನಡೆಸಿದ ಅಧ್ಯಯನ. ಈ ನಿಟ್ಟಿನಲ್ಲಿ ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಮಸಿ_ಮಚ್ಚೆ (ಇಂಕ್_ಬ್ಲಾಟ್) ಪ್ರಯೋಗಗಳ ನೆರವಿನಿಂದ ಕಲ್ಪನಾಸಂಪತ್ತಿನ ಬಗ್ಗೆ ನಡೆಸಲಾಗಿರುವ ಅಧ್ಯಯನ ಗಮನಾರ್ಹ.  ಈ ಪ್ರಯೋಗವನ್ನು ಮೊದಲು ೧೮೯೫ರಲ್ಲಿ ಮನಶ್ಯಾಸ್ತ್ರಜ್ಞರಾದ ಬಿನೆ ಮತ್ತು ಹೆನ್ರಿ ನಡೆಸಿದರು. ಅನಂತರ ವಿಪ್ಪಲ್ ಎಂಬಾತ ಇಪ್ಪತ್ತು ಮಸಿಮಚ್ಚೆಗಳನ್ನು ಸಿದ್ಧಪಡಿಸಿದ. ಈ ಪ್ರಯೋಗದಲ್ಲಿ ಮಸಿ ಮಚ್ಚೆಗಳನ್ನು ಒಂದೊಂದಾಗಿ ಕೈಗೆತ್ತಿಕೊಂಡು ತನಗೆ ಅದರಲ್ಲಿ ಕಾಣುವ ಅಥವಾ ತಾನು ಅದರಲ್ಲಿ ಕಲ್ಪಿಸಿಕೊಳ್ಳುವ ಎಲ್ಲ ವಸ್ತುಗಳ ಪಟ್ಟಿ ಮಾಡುತ್ತ ಹೋಗಬೇಕು. ಒಬ್ಬ ವ್ಯಕ್ತಿ ಒಟ್ಟು ವಸ್ತುಗಳ ಸಂಖ್ಯೆ ಅಥವಾ ಒಂದು ವಸ್ತುವನ್ನು ಕಲ್ಪಿಸಿಕೊಳ್ಳಲು ಕಲ್ಪಿಸಿಕೊಳ್ಳುವ ಅವನು ತೆಗೆದುಕೊಳ್ಳುವ ಸರಾಸರಿ ಸಮಯ ಆ ವ್ಯಕ್ತಿಯ ಕಲ್ಪನಾಸಂಪತ್ತಿನ ಸೂಚಕವಾಗಿರುತ್ತದೆ.

೧೯೨೦ರ ಸುಮಾರಿಗೆ ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ನಡೆಸಿದ ಹಲವು ಮಸಿ_ಮಚ್ಚೆ ಪ್ರಯೋಗಗಳಿಂದ ಈ ಕೆಳಗಿನ ಮುಖ್ಯಾಂಶಗಳು ಹೊರಬಿದ್ದಿವೆ. ಒಂದು ವಸ್ತುವನ್ನು ಕಲ್ಪಿಸಿಕೊಳ್ಳಲು ವಯಸ್ಕರು ಸರಾಸರಿ ಸುಮಾರು ಹತ್ತು ಸೆಕೆಂಡುಗಳ ಕಾಲವನ್ನು ತೆಗೆದುಕೊಳ್ಳುತ್ತಾರೆ. ಒಂದು ಎರಡು ಮೂರನೆಯ ತರಗತಿಯಲ್ಲಿ ಓದುವ ಮಕ್ಕಳು ನಾಲ್ಕು ಐದು ಆರನೆಯ ತರಗತಿಯ ಮಕ್ಕಳಿಗಿಂತ ಹೆಚ್ಚಿನ ಕಲ್ಪನಾ ಸಂಪತ್ತನ್ನು ಪ್ರದರ್ಶಿಸುತ್ತಾರೆ. ಇದಕ್ಕೆ ಕಾರಣ ಮೊದಲ ಮೂರು ವರ್ಗದ ಮಕ್ಕಳಲ್ಲಿ ಇನ್ನೂ ಸಾಕಷ್ಟು ವಿಮರ್ಶನ ಪ್ರಜ್ಞೆ ಬೆಳೆದಿರುವುದಿಲ್ಲ. ಹಾಗಾಗಿ ಅವರು ಸರಿತಪ್ಪುಗಳ ಗೋಜಿಗೆ ಹೋಗದೆ ಮನಸ್ಸಿಗೆ ತೋಚಿದ್ದನ್ನೆಲ್ಲಾ ವರದಿ ಮಾಡುತ್ತ ಹೋಗುತ್ತಾರೆ. ಆದರೆ ಮೇಲ್ತರಗತಿಗಳಲ್ಲಿರುವ ಮಕ್ಕಳಲ್ಲಿ ವಿಮರ್ಶನ ಪ್ರಜ್ಞೆ ತಕ್ಕಮಟ್ಟಿಗೆ ಬೆಳೆದಿರುವುದರಿಂದ ಅವರು ಮನೋಬಿಂಬಗಳನ್ನು ಕಲ್ಪಿಸಿ ವರದಿ ಮಾಡುವಾಗ ಹೆಚ್ಚಿನ ಜಾಗರೂಕತೆ ವಹಿಸುತ್ತಾರೆ; ಕಲ್ಪನೆಗೆ ಕಡಿವಾಣ ಹಾಕಿಕೊಳ್ಳುತ್ತಾರೆ. ಹಾಗಾಗಿ ಅವರು ಕಡಿಮೆ ಕಲ್ಪನಾಸಂಪತ್ತನ್ನು ಪ್ರದರ್ಶಿಸುತ್ತಾರೆ. ವ್ಯಕ್ತಿಯ ವಯಸ್ಸು ಮತ್ತು ಲಿಂಗ ಭೇದಗಳಿಗಿಂತ ಹೆಚ್ಚಾಗಿ, ಆ ವ್ಯಕ್ತಿಯ ವೃತ್ತಿ, ಜೀವನ ವಿಧಾನ ಅಥವಾ ಇನ್ನಿತರ ಪರಿಸ್ಥಿತಿಗಳನ್ನೆ ಆತನ ಕಲ್ಪನಾಸಂಪತ್ತು ಅವಲಂಬಿಸಿರುತ್ತದೆ. ಅಷ್ಟೇ ಅಲ್ಲದೆ ಕಲ್ಪನಾ ಸಂಪತ್ತಿನಲ್ಲಿ ವ್ಯಕ್ತಿಗತ ವ್ಯತ್ಯಾಸಗಳು ಅಪಾರ.

ಈ ಮೊದಲೇ ಹೇಳಿರುವಂತೆ, ಸಂಶೋಧನೆಗೆ ಒಳಗಾಗಿರುವ ಕಲ್ಪನೆಯ ಇನ್ನೊಂದಂಶ ಕಲ್ಪನಾಸಾಮಥರ್ಯ್‌ವನ್ನು ಕುರಿತದ್ದು. ಇದನ್ನು ಅಧ್ಯಯನ ಮಾಡಲು ಹಲವು ವಿಧಾನಗಳನ್ನು ಅನುಸರಿಸಿದ್ದಾರೆ. ಹೆಚ್ಚು ಬಳಕೆಯಲ್ಲಿರುವ ವಿಧಾನವೆಂದರೆ ಮ್ಯಾಸಲಾನ್ ಮೊದಲು ಬಳಸಿದ, ಆತನ ಹೆಸರಿನಿಂದಲೇ ಪ್ರಸಿದ್ಧವಾಗಿರುವ ಮ್ಯಾಸಲಾನ್ ವಿಧಾನ. ಈ ವಿಧಾನದಲ್ಲಿ ಮೂರು ಶಬ್ದಗಳನ್ನು (ನಾಮಪದ ಮತ್ತು ಕ್ರಿಯಾಪದಗಳು) ಕೊಟ್ಟು, ಅವನ್ನು ಬಳಸಿಕೊಂಡು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ವಾಕ್ಯ ರಚಿಸಲು ಸಾಧ್ಯವೋ ಅಷ್ಟು ವಾಕ್ಯಗಳನ್ನು ನಿರ್ಮಿಸುವಂತೆ ಹೇಳಲಾಗುತ್ತದೆ. ವಾಕ್ಯಗಳನ್ನು ಪೂರ್ಣಗೊಳಿಸುವ ವಿಧಾನವನ್ನು ಕೂಡ ಕಲ್ಪನಾಸಾಮರ್ಥ್ಯದ ಅಭ್ಯಾಸದಲ್ಲಿ ಉಪಯೋಗಿಸಲಾಗಿದೆ. ಈ ವಿಧಾನದಲ್ಲಿ ವಾಕ್ಯದ ಮೊದಲ ಭಾಗವನ್ನು ಕೊಟ್ಟು, ಆ ವಾಕ್ಯವನ್ನು ಪೂರ್ಣಗೊಳಿಸುವಂತೆ ಹೇಳಲಾಗುತ್ತದೆ. ಬಿನೇ ಈ ವಿಧಾನವನ್ನು ತನ್ನ ಇಬ್ಬರು ಹೆಣ್ಣುಮಕ್ಕಳ ಮೇಲೆ ಪ್ರಯೋಗಿಸಿ, ಅವರ ಕಲ್ಪನಾಸಾಮರ್ಥ್ಯದಲ್ಲಿದ್ದ ಗಮನಾರ್ಹ ವ್ಯತ್ಯಾಸಗಳನ್ನು ಕಂಡುಕೊಂಡ. ಆ ಮಕ್ಕಳು ವಾಕ್ಯಗಳನ್ನು ಪೂರ್ಣಗೊಳಿಸಿದ ವೇಗದಲ್ಲಿ ಮಾತ್ರವಲ್ಲದೆ, ವಾಕ್ಯ ಪೂರ್ಣಗೊಳಿಸಿದ ವಿಧಾನದಲ್ಲಿ ಕೂಡ ವ್ಯತ್ಯಾಸಗಳಿದ್ದುವು.

ಎಬಿಂಗ್ ಹೌಸನ ಪೂರ್ಣತಾ ವಿಧಾನ ಕಲ್ಪನಾಸಾಮರ್ಥ್ಯದ ಮತ್ತೊಂದು ಮಾಪಕ. ಈ ವಿಧಾನದಲ್ಲಿ ಮಧ್ಯೆ ಮಧ್ಯೆ ಬಿಟ್ಟು ಹೋಗಿರುವ ಶಬ್ದಗಳಿಂದ ಅಥವಾ ಶಬ್ದ ಸಮುಚ್ಚಯದಿಂದ ಕೂಡಿರುವ ಒಂದು ಭಾಗವನ್ನು ಕೊಟ್ಟು ಅದರಲ್ಲಿ ಬಿಟ್ಟು ಹೋಗಿರುವ ಭಾಗಗಳನ್ನು ಭರ್ತಿ ಮಾಡುವಂತೆ ಹೇಳಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ವಿಧಾನವೆಂದರೆ, ಕೊಟ್ಟಿರುವ ಕೆಲವು ಶಬ್ದಗಳನ್ನು ಬಳಸಿಕೊಂಡು ಒಂದು ಕಥೆಯನ್ನು ಕಟ್ಟುವಂತೆ ಹೇಳುವುದು. ಕಲ್ಪನಾಸಾಮರ್ಥ್ಯದ ಅಧ್ಯಯನದಲ್ಲಿ ಉಪಯೋಗಿಸಿರುವ ಮತ್ತೊಂದು ವಿಧಾನವೆಂದರೆ ಪದ ನಿರ್ಮಾಣ ಪರೀಕ್ಷೆ. ಈ ವಿಧಾನದಲ್ಲಿ ಕೊಟ್ಟಿರುವ ಅಕ್ಷರಗಳ ಸಮೂಹವನ್ನು ಬಳಸಿಕೊಂಡು, ನಿರ್ದಿಷ್ಟ ವೇಳೆಯಲ್ಲಿ ಎಷ್ಟು ಶಬ್ದಗಳನ್ನು ರಚಿಸಲು ಸಾಧ್ಯವೋ ಅಷ್ಟನ್ನು ರಚಿಸುವಂತೆ ಹೇಳುವುದು.

ಮೇಲೆ ಹೇಳಿದ ಕಲ್ಪನಾಸಾಮರ್ಥ್ಯದ ಅಧ್ಯಯನದ ವಿಧಾನಗಳೆಲ್ಲ ಭಾಷೆಯ ಬಳಕೆಗೆ ಸಂಬಂಧಿಸಿದಂತಿರುವುದರಿಂದ ಕಲ್ಪನಾ ಸಾಮರ್ಥ್ಯಕ್ಕೆ ಸಂಬಂಧಪಟ್ಟ ಅಧ್ಯಯನ ಕೂಡ ಬಹುಪಾಲು ಭಾಷಾ ಸೃಷ್ಟಿಯನ್ನೊಳಗೊಂಡ ಕಲ್ಪನೆಗೇ ಸೀಮಿತವಾಗಿದೆ. ಆದ್ದರಿಂದ ಈ ವಿಧಾನಗಳನ್ನು ಉಪಯೋಗಿಸಿಕೊಂಡು ಕಂಡುಹಿಡಿದ ವಿಚಾರಗಳು ಸಾಮಾನ್ಯವಾಗಿ ಆಯಾ ಭಾಷೆಗಳಲ್ಲಿನ ವ್ಯಕ್ತಿಗತ ವ್ಯತ್ಯಾಸಗಳಿಂದ ಕಲುಷಿತವಾಗಿರುತ್ತವೆ. ಒಟ್ಟಿನಲ್ಲಿ ಈ ಪ್ರಯೋಗಗಳಿಂದ ಹೊರಬಿದ್ದ ಫಲಿತಾಂಶಗಳ ವ್ಯಾಪ್ತಿ ತೀರ ಸಂಕುಚಿತವಾದದ್ದು ಎಂಬುದನ್ನು ಮನಗಾಣಬೇಕು.

ಇತ್ತೀಚಿನ ಮನಶ್ಶಾಸ್ತ್ರಸಾಹಿತ್ಯದಲ್ಲಿ ಕಲ್ಪನೆಗೆ ಹೆಚ್ಚಿನ ಮಾನ್ಯತೆ ಕಂಡುಬರುತ್ತಿಲ್ಲ. ಬದಲಾಗಿ ಮನೋವಿಜ್ಞಾನಿಗಳು ಭ್ರಮೆ (ಫ್ಯಾಂಟಸಿ), ಸೃಜನಾತ್ಮಕತೆ (ಕ್ರಿಯೆಟಿವಿಟಿ) ಮುಂತಾದ ಪದಗಳನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗೆಂದ ಮಾತ್ರಕ್ಕೆ ಮನಷ್ಯನ ಮಾನಸಿಕ  ವ್ಯಾಪಾರದಲ್ಲಿ ಕಲ್ಪನೆಯ ಸ್ಥಾನವೇ ಏನೋ ಹೆಚ್ಚುಕಡಿಮೆ ಆಗಿಬಿಟ್ಟದೆ ಎಂದೇನಲ್ಲ; ಈಚಿನ ಮನೋವಿಜ್ಞಾನಿಗಳಿಗೆ ಕಲ್ಪನೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ, ಅಷ್ಟೆ.	(ಎಚ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ